ಪಕ್ವತೆ -
	ಮನುಷ್ಯನು ಹುಟ್ಟುವ ಮುನ್ನ ಮತ್ತು ಹುಟ್ಟಿದ ಅನಂತರವೂ ಬೆಳೆಯುತ್ತಿರುವನು. ಸ್ವಲ್ಪಕಾಲನಂತರ ಈ ಬೆಳವಣಿಗೆಯು ನಿಲ್ಲುವುದು. ಈ ಬೆಳವಣಿಗೆ ಪೂರ್ಣವಾಗಿರುವ ಹಂತಕ್ಕೆ ಪಕ್ವತೆ ಎನ್ನುವರು. ಪಕ್ವತೆ ಹೊಂದಿದ ಮೇಲೆ ಸಾಧಾರಣವಾಗಿ ಬೆಳವಣಿಗೆಯಲ್ಲಿ ಮುಂದೆ ವೃದ್ದಿ ಇರುವುದಿಲ್ಲ. ನರಗಳ ಮತ್ತು ರಸಗ್ರಂಥಿಗಳಿಗೆ ಸಂಬಂಧಪಟ್ಟ ರಚನೆಗಳು ಹುಟ್ಟಿದ ಮೇಲೆ, ಸುಮಾರು ಹತ್ತು ವರ್ಷಗಳ ಅನಂತರ ಒಂದು ನಿರ್ದಿಷ್ಟ ಅವಧಿಯನ್ನು ಹೊಂದುತ್ತದೆ. ಲೈಂಗಿಕ ಪಕ್ವತೆ 13 ರಿಂದ 19 ವರ್ಷಗಳೊಳಗೆ ಆಗುವುದು. ಆಗ ತಾರುಣ್ಯಾವಸ್ಥೆ ಆರಂಭವಾಗಿ 21 ವರ್ಷಗಳವರೆಗೆ ಮುಂದುವರಿಯುವುದು. ಒಂದು ಹೊಸ ವರ್ತನೆ ಉಂಟಾಗುವ ಮೊದಲು ಅದಕ್ಕೆ ತಕ್ಕಂಥ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿ ಮತ್ತು ಬೆಳವಣಿಗೆ ಉಂಟಾಗಬೇಕು. ಈ ಅಭಿವೃದ್ಧಿಯೇ ಪಕ್ವತೆ. ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲು ಒಳಗಿನ ದೇಹದ ಇತರ ಅಂಗಗಳೊಡನೆ ಸಹಕರಿಸಲೂ ಉಂಟಾಗುವಂಥ ದೇಹದ ಬೆಳವಣಿಗೆಯ ಸ್ಥಿತಿಗೂ ಪಕ್ವತೆ ಎಂಬ ಪದ ಅನ್ವಯಿಸುತ್ತದೆ. 

	ಜೀವಕೋಶದಲ್ಲಿರುವ ಜೀವಶಕ್ತಿ ಮೈಟಾಸಿನ್ ಎಂಬ ಪ್ರಕ್ರಿಯೆ ಅದರ ಪಡಿಯಚ್ಚನ್ನು ತಯಾರಿಸಿ ತನ್ನ ಪೀಳಿಗೆಯನ್ನು ಮುಂದುವರಿಸಲು ಪ್ರಯತ್ನಿಸುತ್ತದೆ. ಜೀವಕಣದ ವಿಭಜನೆಗೆ ಮೊದಲು ಅದರ ಪಡಿಯಚ್ಚನ್ನು ಸೃಷ್ಟಿಸುವ ಶಕ್ತಿಯುಳ್ಳ ಒಂದು ಅವಸ್ಥೆಯನ್ನು ಜೀವಕೋಶ ಮುಟ್ಟಬೇಕು. ಆ ಅವಸ್ಥೆಯೇ ಪಕ್ವತೆ, ಈ ತತ್ತ್ವ ಎಲ್ಲ ಪ್ರಾಣಿಗಳಿಗೂ ಅನ್ವಯಿಸುವುದು. ಮನುಷ್ಯರಲ್ಲಿ ಈ ತತ್ತ್ವ ದೇಹಕ್ಕೆ ಮಾತ್ರವೇ ಅಲ್ಲದೆ, ಭಾವಾತ್ಮಿಕ, ಸಾಮಾಜಿಕ, ನೈತಿಕ, ಆಧ್ಯಾತ್ಮಕ ಮುಂತಾದ ಅಂಶಗಳಿಗೂ ಅನ್ವಯಿಸುತ್ತದೆ.

	ಒಬ್ಬ ವ್ಯಕ್ತಿ ಜೀವನವನ್ನು ಏಕಕಣಜೀವಿಯಾಗಿ ಪ್ರಾರಂಭಿಸುತ್ತಾನೆ. ಈ ಏಕಕಣ ವಿಭಾಗ ಮತ್ತು ಕಣ ವಿಂಗಡಣೆ ಎಂಬ ಎರಡು ಕ್ರಿಯೆಗಳಿಂದಾಗಿ ಜೀವಿಯ ವಿಶಿಷ್ಟ ವ್ಯಕ್ತಿತ್ವ ಆರಂಭವಾಗುವ ಹಂತದವರೆಗೆ ಬೆಳೆಯುತ್ತದೆ. ದೇಹದ ಅಂಗಗಳು ಬೆಳೆಯುತ್ತ ಬಂದಂತೆ ಚಟುವಟಿಕೆ ಕಾಣಿಸಿಕೊಳ್ಳುತ್ತದೆ. ಪ್ರಾರಂಭದ ಏಕಕಣ ಜೀವಿಯಲ್ಲಿನ ಅನುವಂಶಿಕವಸ್ತುವಿನ ಮತ್ತು ಫಲಿತ ಕಣಗಳ ನಡುವೆ ಆಗುವ ಮತ್ತು ಹೊರಾವರಣದ ಪ್ರಚೋದನೆಗಳ ಪರಸ್ಪರ ಪ್ರತಿಕ್ರಿಯಗೆಳ ಪರಿಣಾಮವಾಗಿ ಹಲವಾರು ವ್ಯತ್ಯಾಸಗಳು ದೇಹದಲ್ಲಿ ಉಂಟಾಗುತ್ತವೆ. ಉದಾ : ಗಾತ್ರ ಎತ್ತರ ಮತ್ತು ತೂಕ ಮುಂತಾದುವುಗಳಲ್ಲಿ ಬೆಳವಣಿಗೆ, ದೇಹಪ್ರಮಾಣದಲ್ಲಿ ವ್ಯತ್ಯಾಸಗಳು, ದೇಹದ ಅಂಗಾಂಗಳ ಜಟಿಲತೆಯಲ್ಲಿ ಬದಲಾವಣೆಗಳು ಮತ್ತು ಹೊಸ ರಚನೆಗಳ ಆರಂಭ ಇವೇ ಮುಂತಾದ ವ್ಯತ್ಯಾಸಗಳು ಉಂಟಾಗುವುವು.

	ನವಜಾತ ಶಿಶು ಒಂದು ಹೊಸ ಪ್ರಪಂಚಕ್ಕೆ ಬರುತ್ತದೆ. ಹುಟ್ಟುವ ಮೊದಲು ಅದು ಅನೇಕ ತಿಂಗಳವರೆಗೆ ಒಂದು ನಿಯತವಾದ ಕಾವಿರುವ ದ್ರವವಸ್ತುವಿನ ಮಾಧ್ಯಮದಲ್ಲಿ ಜೀವಿಸುತ್ತಿತ್ತು. ಈ ದ್ರವವಸ್ತುವಿನ ವಾತಾವರಣ ಅದನ್ನು ಹೊರ ಪ್ರಪಂಚದ ಎಲ್ಲ ಪ್ರಚೋದನೆಗಳಿಂದ ರಕ್ಷಿಸುತ್ತಿತ್ತು. ಅದು ತಾಯಿಯಿಂದ ಆಹಾರ ಮತ್ತು ಆಮ್ಲಜನಕವನ್ನೂ ಕೂಡ ಪಡೆಯುತ್ತಿತ್ತು. ಈ ಹೊಸ ಶಿಶು ತಾನು ಬದುಕುವುದಕ್ಕಾಗಿ ರಕ್ತಚಲನೆ, ಉಸಿರಾಡುವಿಕೆ, ಜೀರ್ಣಶಕ್ತಿ ಮತ್ತು ಇನ್ನಿತರ ಜಟಿಲವಾದ ದೈಹಿಕ ಕ್ರಿಯಾಶಕ್ತಿಗಳನ್ನು ಬೆಳೆಸಿಕೊಂಡು, ಒಂದು ಹೊಸ ಪರಿಸ್ಥಿತಿಯನ್ನು ಎದುರಿಸಬೇಕಾಗುವುದು ವಿಧಿತ. ಆದ್ದರಿಂದ ಹೀಗೆ ಕೆಲಸಮಾಡುವ ಅವಯವಗಳ ಗುಂಪಾದ ಉಸಿರಾಡುವಿಕೆ ಜೀರ್ಣಕ್ರಿಯೆ ಮತ್ತು ರಕ್ತಪರಿಚಲನೆಯ ಅಂಗಗಳನ್ನು ಆಗಲೇ ಪಕ್ವವಾಗಿದೆ ಎನ್ನುತ್ತೇವೆ. ಈ ಅವಯವಗಳ ಪಕ್ವತೆ ಗರ್ಭಧಾರಣವಾದ ಮೇಲೆ, ತಾಯಿಯ ಗರ್ಭಾಶಯದಲ್ಲಿ 220 ದಿನಗಳೊಳಗೆ ಉಂಟಾಗುತ್ತದೆ.

	ಮೊದಲನೆಯ ಕೆಲವು ದಿನಗಳಲ್ಲಿ ತಲೆ ಧ್ರುವೀಕರಣ, ತುಟಿಗಳಸ್ಫುರಣ, ಮೊಲೆಯುಣ್ಣುವಿಕೆ ಮುಂತಾದ ಕ್ರಯೆಗಳನ್ನು ಒಳಗೊಂಡ ಸಂಕೀರ್ಣ ಪ್ರತಿಕ್ರಿಯೆಗಳು ಉಂಟಾಗುತ್ತವೆ. ಹುಟ್ಟಿದ ಮೇಲೆ ಕೆಲವು ದಿನಗಳಲ್ಲಿಯೆ ಬೆಬಿನ್‍ಸಕೀ ಮತ್ತು ಪ್ಲಾಂಟಾರ್ ಅನೈಚ್ಛಿಕ ಪ್ರತಿಕ್ರಿಯೆಗಳು ಮರೆಯಾಗಿ ಐಚ್ಛಿಕಕ್ರಿಯೆಗಳ ಉದಯವನ್ನು ಸಾರುತ್ತವೆ.

	ಮಗು ಹಟ್ಟುವುದಕ್ಕೆ ಮೊದಲೆ ಸಂವೇದನಾಂಗಗಳ ಪಕ್ವತೆ ಆರಂಭವಾಗುತ್ತದೆ. ಶೀತೋಷ್ಣ ಮತ್ತು ನೋವುಗಳ ಪ್ರಚೋದನೆಗಳಿಗೆ ಪ್ರತಿಕ್ರಿಯೆ ಗರ್ಭದಲ್ಲಿರುವಾಗಲೆ ವ್ಯಕ್ತವಾಗುತ್ತದೆ. ಆದರೆ ನೋವಿನ ಆರಿವು ಸಾಕಷ್ಟು ಚೆನ್ನಾಗಿ ಬೆಳೆದಿರುವುದಿಲ್ಲ. ಹುಟ್ಟಿದ ಕೂಡಲೆ ಅದು ನೆಲೆಗೊಳ್ಳುತ್ತದೆ. ಮೂಸಿನೋಡುವ, ರುಚಿ ನೋಡುವ ಮತ್ತು ಕೇಳುವ ಕಾರ್ಯಗಳಿಗೆ ಸಂಬಂಧಪಟ್ಟ ನರಕಣಗಳು, ಹುಟ್ಟಿದ ಅನಂತರ ತಕ್ಕ ಪ್ರಚೋದನೆಗಳಿಗೆ ಪ್ರತಿಕ್ರಿಯೆಯನ್ನು ತೋರಿಸುವ ಘಟ್ಟವನ್ನು ತಲುಪಿರತ್ತವೆ.

	ಮೈಎಲಿನ್ ಷೀತ್ ಎಂಬ ಒಂದು ಬಿಳಿಯ ಮೇದಸ್ಸಿನ ಹೊದಿಯನ್ನು ನರತಂತುಗಳು ಪಡೆದುಕೊಳ್ಳುತ್ತವೆ. ಈ ಹೊದಿಕೆ ರೂಪುಗೊಳ್ಳುವ ಕಾರ್ಯ ಗರ್ಭದಲ್ಲಿರುವಾಗಲೇ ಆರಂಭವಾಗಿ ವ್ಯಕ್ತಿ ಪಕ್ವವಾಗುವವರೆಗೂ ಮುಂದುವರಿಯುತ್ತದೆ. ಈ ಹೊದಿಕೆಯ ಉತ್ಪಾದನೆ ಮತ್ತು ವ್ಯಕ್ತಿಯ ಪಕ್ವತೆಯ ಸಂಬಂಧ ಪರಸ್ಪರ ಅನ್ಯೋನ್ಯವಾದುದು. ಮಿದುಳಿನಲ್ಲಿ ಐಚ್ಛಿಕ ಕ್ರಿಯಾ ಪ್ರದೇಶ ಸಂವೇದನಾನುಭವ ಪ್ರದೇಶ, ಮತ್ತು ದೃಷ್ಟಿಯ ಅನುಭವದ ಪ್ರದೇಶ ಇವೆಲ್ಲವೂ ಮೊದ ಮೊದಲು ಪಕ್ವವಾಗುವ ಭಾಗಗಳು. ಶ್ರವಣಾನುಭವದ ಪ್ರದೇಶ ಮತ್ತು ಐಚ್ಛಿಕ ಕ್ರಿಯಾಪ್ರದೇಶದ ಮುಂದಿನ ಕ್ರಿಯಾ ಮತ್ತು ಕೊನೆಯದಾಗಿ ಸಂಘಟನಾ ಪ್ರದೇಶಗಳು ಅನಂತರ ಪಕ್ವವಾಗುವುವು.

	ಹೊಸ ಶಿಶುವಿಗೆ ನಾನಾಭಾವನೆಗಳನ್ನು ಸ್ಪಷ್ಟವಾಗಿ ತಿಳಿಸಲು ಬರುವಿದಿಲ್ಲ. ಅದು ವ್ಯಕ್ತಪಡಿಸುವ ಭಾವನಾಸಮೂಹ ತಾರತಮ್ಯಹೀನವಾಗಿರುವುದು. ಒಟ್ಟಿನಲ್ಲಿ ಅದನ್ನು ಉದ್ರೇಕ ಎನ್ನಬಹುದು. ಮಿದುಳಿನ ಒಂದು ಭಾಗವಾದ ಹೈಪೋತಾಲಮಸ್ಸಿನ ಪಕ್ವತೆಯಿಂದ ಭಾವಾತ್ಮಕ ನಡವಳಿಕೆಯ ವಿವಿಧ ಚಲನೆಗಳು ಉಂಟಾಗುತ್ತದೆನ್ನುವುದು ನಿಜ. ಹೈಪೋತಾಲಮಸ್ ಕೆಲವು ಭಾವೋದ್ದೀಪಕ ಪ್ರಚೋದನೆಗಳನ್ನು ಪ್ರೇರಿಸಿದರೂ ಹೊರ ಮಿದುಳು ಅದರ ಕೆಲಸವನ್ನು ತಡೆದು ಅದನ್ನು ಎಲ್ಲೆಯಲ್ಲಿಡುತ್ತದೆ. ಮಾನವನಲ್ಲಿ ಭಾವಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗುವುದಕ್ಕೆ ಮಹಾ ಮಸ್ತಷ್ಕ ವಿಕಾಸವೇ ಕಾರಣ. ಮಹಾಮಸ್ತಿಷ್ಕದ ಉಪಯೋಗವನ್ನು ಪಡೆಯುವ ಶಿಶು ತನಗೆ ಸಹಜವಾದ ಅಭ್ಯಾಸಗಳನ್ನು ಬದಲಾಯಿಸಿಕೊಂಡು ಕ್ರಮೇಣ ತನ್ನ ಸಮಾಜವರ್ಗ ಮೆಚ್ಚುವ ಭಾವಾಭಿವ್ಯಕ್ತಿಯನ್ನು ಕಲಿಯುತ್ತದೆ. ಅಂದರೆ ಭಾವವಿಕಾಸ ಮತ್ತು ಸಂಯಮಗಳು ಹೊರಮಿದುಳಿನ ಪಕ್ವತೆ ಮತ್ತು ಕಲಿಕೆಗೆ ಅಧೀನವಾಗಿರುವುದೆಂಬುದು ಸ್ಪಷ್ಟ.

	ಹತ್ತನೆಯ ವಯಸ್ಸಿನಲ್ಲಿ ಎಲ್ಲ ಅವಯವಗಳೂಪಕ್ವವಾಗಿ ಜೀವಿಯಲ್ಲಿ ತಟ್ಟನೆ ಒಂದು ಹೊಸ ಶಕ್ತಿ ಗೋಚರವಾಗುತ್ತದೆ. ಆಗ ಗಂಡು ಹೆಣ್ಣಿನ ಭೇದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಪ್ರಜನನ ಕಾರ್ಯಗಳು ಆರಂಭವಾಗುವ ಈ ಕಾಲಕ್ಕೆ ಪ್ರಬುದ್ಧತೆ ಎನ್ನಬಹುದು. ಇದು ಲೈಂಗಿಕ ಗ್ರಂಥಿಗಳ, ಹೊರಗಣ ಲೈಂಗಿಕ ಅವಯವಗಳ ಮತ್ತು ನರಮಂಡಲದ ಕೆಲವು ಭಾಗಗಳನ್ನೊಳಗೊಂಡಿರುವ ಜಟಿಲ ಪಕ್ವತೆಯ ಫಲ. ಪ್ರಬುದ್ಧತೆ ಪ್ರಾರಂಭವಾಗುವಕಾಲ ಅನಿರ್ದಿಷ್ಟ. ಆದರೂ ಸಾಮಾನ್ಯವಾಗಿ ಇದನ್ನು ಹೆಣ್ಣುಮಕ್ಕಳಲ್ಲಿ 13ನೆಯ ವಯಸ್ಸಿನಲ್ಲೂ ಗಂಡು ಮಕ್ಕಳಲ್ಲಿ 14ನೆಯ ವಯಸ್ಸಿನಲ್ಲೂ ನಿರೀಕ್ಷಿಸಬಹುದು. ಲೈಂಗಿಕ ಗ್ರಂಥಿಗಳ ಪಕ್ವತೆಯಿಂದಲೇ ಎರಡು ಲಿಂಗಗಳಿಗೂ ವಿಲಕ್ಷಣವಾದ ಗೌಣಲೈಂಗಿಕ ಲಕ್ಪ್ಷಣಗಳು ಉಂಟಾಗುತ್ತವೆನ್ನಬಹುದು.

	ಪಕ್ವತೆ ಮತ್ತು ವಾಸ್ತವಿಕತೆಗಳಿಂದ ತಪ್ಪಿಸಿಕೊಳ್ಳುವ ದಾರಿಯನ್ನು ವಿಕಲ್ಪನೆಯಿಂದ ಹುಡುಕುವುದರಲ್ಲಿ ಮನುಷ್ಯನ ಮನಸ್ಸು ಬಹಳ ನಿಸ್ಸೀಮ. ಪಕ್ವತೆಯಿಂದ ತಪ್ಪಸಿಕೊಳ್ಳುವ ದಾರಿಯೆಂದರೆ ಈ ಪ್ರಪಂಚವನ್ನು ಹಗುರವಾಗಿ, ಮೇಲೆ ಮೇಲೆಯೆ ಮತ್ತು ವಿನೋದ ದೃಷ್ಟಿಯಿಂದ ನೋಡುವ ಲೀಲಾ ಮನೋಧರ್ಮ. 

	ಏಕಾಂತವಾಸ, ಉನ್ನತ್ತಾಭಿಮಾನ, ವಿಕ್ಷೇಪ, ರೋಗ ಮತ್ತು ಕುತರ್ಕ ಮುಂತಾದವು ಪಕ್ವತೆಯಿಂದ ಪಾರಾಗುವ ಇತರ ಸಾಧನಗಳು. ಇವು ಮಕ್ಕಳ ವರ್ತನೆಯ ಮಾದರಿಗಳು ಮತ್ತು ಬಾಲಿಶವಾದ ಮನೋಭಾವಗಳು. ಈ ಅವಸ್ಥೆಯನ್ನು ಮುಂದೆ ಪಕ್ವವಾಗಲಿರುವ ಮನುಷ್ಯನ ಪ್ರತಿಗಮನ ಎನ್ನುತ್ತಾರೆ. ವಿಪರೀತ ಪ್ರತಿಗಮನ ಜಗಳದಲ್ಲಿ ಕೊನೆಗಾಣಬಹುದು. ಆದ್ದರಿಂದಾಗಿ ಒಬ್ಬ ವ್ಯಕ್ತಿ ತನ್ನ ಸಮಾಜದಲ್ಲಿ ತನ್ನನ್ನೂ ಮತ್ತು ತನ್ನ ಪಾತ್ರವನ್ನು ಅರಿಯಲು ಬೌದ್ಧಿಕವಾಗಿ ವಿಕಾಸ ಹೊಂದಿರಬೇಕು. ಅವನು ಬಾಲಿಶವಾದ ಭಾವಗಳನ್ನು ವ್ಯಕ್ತಪಡಿಸದೆ ಧೈರ್ಯ ಮತ್ತು ವಿಶ್ವಾಸದಿಂದ ವಾಸ್ತವಿಕತೆಯನ್ನು ಎದುರಿಸಲೂ ತನ್ನನ್ನು ಹತೋಟಿಯಲ್ಲಿಟ್ಟುಕೊಳ್ಳಲೂ ಭಾವಾತ್ಮಕವಾಗಿ ವಿಕಾಸಗೊಳ್ಳಬೇಕು. ತನ್ನಿಂದ ಭಿನ್ನವಾದ ಮನುಷ್ಯರೊಡನೆ ಹೊಂದಿಕೊಂಡು ಮುಂದುವರಿಯಲು ಸಾಮಾಜಿಕವಾಗಿ ಅರಳಬೇಕು ಅಲ್ಲದೆ, ಅನಪೇಕ್ಷಿತವಾದುದನ್ನು ಮತ್ತು ಕೆಟ್ಟದ್ದನ್ನು ತೊರೆಯುವುದಕ್ಕೂ ಒಳ್ಳೆಯದನ್ನು ಮಾಡುವುದಕ್ಕೂ ನೈತಿಕ ನಿಲವು ಏರ್ಪಡುವಂತಾಗಬೇಕು.

	ಯಾವಾತ ತನ್ನನ್ನು ಹತೋಟಿಯಲ್ಲಿಟ್ಟುಕೊಂಡು ಸಾಮಾಜಿಕವಾಗಿ ಹೊಂದಿಕೊಂಡು ಹೊಗುತ್ತ ಸಮಾಜದಲ್ಲಿರುವ ಇತರ ಜೀವಿಗಳಿಂದ ಭಿನ್ನವಾದ ತನ್ನ ವ್ಯಕ್ತಿತ್ವವನ್ನು ತೋರಿಸುತ್ತ ಇರುವನೊ ಆತನೆ ಸಂಪೂರ್ಣವಾಗಿ ವಿಕಾಸಗೊಂಡ ಮನುಷ್ಯ. ಪಕ್ವತೆ ಮಾನವನ ಬೆಳವಣಿಗೆಯಲ್ಲೆ ಒಂದು ಕಾರ್ಯವಿಧಾನ, ಅಂತಿಮ ಫಲವಲ್ಲ.					   (ಟಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ